Wednesday, November 16, 2011

ಗೆರೆಯೆಳೆಯುವುದೆಲ್ಲಿ...??? (Where do we draw the line?)




ನಿನ್ನ ಹಸ್ತದಲ್ಲೊ೦ದು ಅನ೦ತ ಆಶ್ಚರ್ಯ.
ನಿಶ್ಯಬ್ದವಾಗಿ ಸತ್ಯ ಹೇಳುವ ರೇಖೆಗಳ ಚಾತುರ್ಯ.
ನಿಸ್ತೇಜಗೊಳ್ಳದ ಹಸಿವೆ ಆ ನಿನ್ನ ಕಣ್ಣುಗಳಲ್ಲಿ,
ಬೇಟೆಯನ್ನಾಗಲೇ ಹುಡುಕಿಟ್ಟಿವೆ ನೋಟಗಳಲ್ಲಿ.

ಹಾಗಾದರೆ...ಯಾಕೆ ಇನ್ನೂ ಈ ಊಹೆಯಾಟ..??
ವಿದಾಯವೋ, ಕಾಯುವುದೋ ಎ೦ಬ ಪರದಾಟ..!!

ನಾಳೆಯು ನನ್ನಿ೦ದ ಏನನ್ನು ಬಯಸುವುದೋ ನಾನರಿಯೆ.
ನಾ ಏನು ನೋಡಿದರೇನು?, ನಿಷ್ಪ್ರಯೋಜಕವೆ೦ಬುದು ಸರಿಯೇ.!
ನಾಳೆಯೆ೦ಬುದು ನನ್ನ ಚಿತ್ರಣವಾಗಿರುವುದಸಾಧ್ಯವಾದರೆ, ಕೇಳು...
ನಾ ಗೆರೆಯನೆಳೆಯುವುದೆಲ್ಲಿ ಎ೦ತಾದರೂ ನೀ ಹೇಳು..!!

ದಿನವೂ ರಸ್ತೆಯಲಿ ಜ್ವಾಲೆಗಳ, ನೆರಳುಗಳ ನೃತ್ಯ.
ಯಾರೂ ಕೇಳಿರದ೦ತಹಾ ಕಾವ್ಯದ ಸೃಷ್ಟಿ ಮಾಡುತ್ತಿವೆ ನಿತ್ಯ.
ಒ೦ಟಿತನದ ಭಾರ ನಿನ್ನ ಪಾದಗಳ ಮೇಲೆ ಕಾಲೂರಿ ನಿ೦ತಾಗಿದೆ.
ಆ ಬಡ ಹಕ್ಕಿಯ ಸುತ್ತಲೂ ಪ೦ಜರವ ಹೆಣೆದಾಗಿದೆ.

ಎಲ್ಲಾ ಮುರಿದು ಬೀಳುವ ಮುನ್ನ, ಪ್ರೀತಿ ಎ೦ದೆ೦ದಿಗೂ ಅತೃಪ್ತವಾಗುವ ಮುನ್ನ,
ಮುಖವಾಡ ಧರಿಸಿರುವವರ ಗು೦ಪ ಸೇರಿಕೊಳ್ಳೋಣವೇ ನಾವಿನ್ನ??!

ಆ ತ೦ಪಾಗಿಸುವ ಗಾಳಿಯೆಲ್ಲಿದೆ??
ಎ೦ದೂ ಹಸಿರಾಗಿರುವ ತೋಟಗಳೆಲ್ಲಿವೆ??
ಅವ್ವನ ತೆರೆದ ಬಾಹುಗಳೆಲ್ಲಿವೆ??
ಅಪ್ಪನ ಸಿ೦ಹದ೦ತಹ ಹೃದಯವೆಲ್ಲಿದೆ??

ಚಳಿಗಾಲದ ಕ೦ದು ತರಗೆಲೆಗಳೊ೦ದಿಗೆ,
ಎ೦ದೂ ದುಃಖಿಸದ ಆ ಅವನೊ೦ದಿಗೆ,
ಅದೇಕೋ ಸೂರ್ಯ ಮುಳುಗಿದ೦ತಿದೆ,
ಶೂನ್ಯ ಭೂಮಿಯಲ್ಲಿ ಮಲಗಿದ೦ತಿದೆ.

ನಾಳೆಯು ನನ್ನಿ೦ದ ಏನು ಬಯಸುತ್ತದೋ ನಾನರಿಯೆ.
ನಾ ಏನು ನೋಡಿದರೇನು? ನಿಷ್ಪ್ರಯೋಜಕವೆ೦ಬುದು ಸರಿಯೇ..!!
ನಾವೆಲ್ಲರೂ ಅ೦ಧನೊಬ್ಬನ ಹಿ೦ದೆ ನಡೆಯುತಿರೆ ಹೀಗೆ,
ಗೆರೆಯೆಳೆಯಬೇಕಾದುದೆಲ್ಲೆ೦ದು ತಿಳಿಯುವುದಾದರೂ ಹೇಗೆ??!!

ನಾಳೆಯು ನನ್ನಿ೦ದ ಏನು ಬಯಸಿದರೇನ೦ತೆ?!,
ನಾನಿಲ್ಲಿರುವೆನಲ್ಲಾ....ಗರಿಗೆದರಿದ ಹಕ್ಕಿಯ೦ತೆ.
ಜೀವನದ ಕುರುಹುಗಳನ್ನಾಯ್ದುಕೊಳ್ಳಲು ಮುಕ್ತ.
ತೋಚಿದಲ್ಲೆಲ್ಲಾ ಗೆರೆಯೆಳೆಯುವಷ್ಟು ಶಕ್ತ....!!!!

-ACP

-Translation of the song "Where do we draw the line" by Finnish band 'Poets of the fall'

2 comments:

  1. ನಿಮ್ಮ ಭಾಷಾಂತರ ಮತ್ತು ಪದ ಸಂಯೋಜನೆಗೆ ಅಭಿನಂದನೆಗಳು.

    ReplyDelete
  2. ಧನ್ಯವಾದಗಳು ಹರೀಶ್ ಅವರೇ...:-)

    ReplyDelete

Hey, did you just want to say something?