Friday, November 27, 2009

ಮೇಲ್ನೋಟ - A contrast

ಪುಟಾಣಿ ಮಗುವಿನ ಸಂಭಾಷಣೆ ,
ಜೊತೆಗೆ ಅನಂತ ಅನ್ವೇಷಣೆ,
ತನ್ನದೇ ಕಣ್ಣಿನಲಿ ವಿಶ್ವ ವಿಶ್ಲೇಷಣೆ,
ಪುಟ್ಟ ಮೆದುಳಿಗಿದು ದ್ಯುತಿ ಸಂಶ್ಲೇಷಣೆ.

ದುಂಡನೆಯ ಕಣ್ಣಿನಲ್ಲಿದ್ದರೂ ಬಿಳಿ ಕಪ್ಪು,
ಅದಿನ್ನೂ ತಿಳಿದಿರಲಿಲ್ಲ ಜಗದ ಬಿಳಿಯೂ ಕಪ್ಪು.
ಅದಕೇನೋ ಕಣ್ಣಿನಲಿ ಮಿಂಚುವಾ ಹೊಳಪು,
ಕತ್ತಲಲೂ ಹಗಲಲೂ ಎಲ್ಲವೂ ಬಿಳುಪು .

ಮೀನೊಂದು ನೀರಿಂದ ಹೊರಬಂದು ನಿಂದು,
ನರಳುವುದು ಕಾಣಿಸಿತು ನೀರಿಲ್ಲವೆಂದು,
ಹೇಳಿತ್ತು ಮೀನೊಡನೆ ಮಗುವಲ್ಲಿ ಬಂದು,
"ನಡೆ ನೀನು ಗೆಳೆಯಾ ಮನೆಯತ್ತ" ಎಂದು.

ಒಂದೆರಡು ಕ್ಷಣ ಮೀನು ಹೊರಳುತ್ತ ಇತ್ತು,
ಮಗುವನ್ನೇ ದಿಟ್ಟಿಸುತ ಧೊಪ್ಪೆಂದು ಬಿತ್ತು,
ಬಿಟ್ಟಿರುವ ಕಣ್ಣುಗಳು ಹಾಗೆಯೇ ಇತ್ತು,
ಕಣ್ಮುಚ್ಚಿ ಬಿಟ್ಟಾಗ ಹೋಗಿತ್ತು ಸತ್ತು.

ದೂರದಲಿ ಕೇಳಿಸಿತು ಅಮ್ಮನಾ ಕೂಗು,
ತನ್ನೊಡನೆ ಬರಲಿಲ್ಲ ಮೀನಂತೂ ಹೇಗೂ,
ಎನ್ನುತ್ತ ಬೇಸರದಿ ಬಿಕ್ಕುತ್ತ ಮಗುವು,
ಹೇಳಿತ್ತು "ನೀ ನೀರೊಳಗೆ ಹೋಗು".

ಮಂಡಿಯಲಿ ಮುಖವಿಟ್ಟು ನೋಡಿತ್ತು ಮಗುವು,
ಮೀನಿನಾ ಆಟಕ್ಕೆ ಬರುತಿತ್ತು ನಗುವೂ,
ತಿಳಿಯಲೇ ಇಲ್ಲವದಕೆ ಮೀನಿನಾ ನೋವು,
ಕಲ್ಪನೆಗೂ ನಿಲುಕದ್ದು ಮೀನಿನಾ ಸಾವು .
-ACP