ಯಾರೋ ಹಾಡಿದ ನೆನಪು,ಎಲ್ಲೋ ಕೇಳಿದ ನೆನಪು,
ಪಾತರಗಿತ್ತಿ ಪಕ್ಕ, ನೀ ನೋಡಿದ್ಯೇನ ಅಕ್ಕ .?
ನೀನೂ ಕೇಳಿರುವೆಯಾ ನನ್ನ ಪಾತರಗಿತ್ತಿ ಅಕ್ಕಾ ..?
ದೂರದಲಿ ಅದೇನದು ಸೆಳೆಯುತಿದೆ ಕಣ್ಣ.?
ಒಹ್ ,ನಿನ್ನ ರೆಕ್ಕೆಯ ಮೇಲೆ ಅದೆಷ್ಟು ಬಣ್ಣ.?
ನೀನಿರಲು ಸನಿಹದಲಿ ಕುಣಿಯುವುದು ಮನವು.,
ನೀನಿರಲು ಜೊತೆಯಲ್ಲಿ ಮನವಾಗುವುದು ಮಗುವು.
ಹಾರೋಣ ಬಾ ನಾವು ಒಂದಷ್ಟು ಹೊತ್ತು,
ನೀಲ ನಭದಲೊಂದು ಸಣ್ಣನೆಯ ಸುತ್ತು.
ನೀ ನಗುತ ಹಾರುತಿರೆ ಸಂಭ್ರಮವು ಎನಗೆ,
ಯೋಚನೆಯ ಮಾಡದಿರು ನಾನಿರುವೆ ನಿನಗೆ.
ಹೂವಲ್ಲ ದೂರದಲಿ ರವಿಯೆಂದು ಗೊತ್ತು,
ಅವನ ನೋಟದಲೆಲ್ಲೋ ಹೂವಂತೂ ಇತ್ತು.
ಭುವಿಯಂತೆ ರವಿಯಲ್ಲಿ ನಂಬಿಕೆಯನಿಟ್ಟು,
ಆ ರವಿಯ ನೋಟದಲಿ ನೋಟವನು ನೆಟ್ಟು,
ನೋಟದಾ ದಿಕ್ಕಿನಲ್ಲಿ ಹಾರೋಣ ನಾವು,
ಸಿಗಬಹುದು ಚಂದದಾ ಒಂದೆರಡು ಹೂವು.
ಜೊತೆಗಿರಲು ಅಕ್ಕಾ ನಿನ್ನ ಮುದ್ದಾದ ಪ್ರೀತಿ,
ಜೊತೆಗಿರುವೆ ನಾ ನನಗಿಲ್ಲ ಭೀತಿ.
ಅದೋ ನೋಡಲ್ಲಿ ಸಣ್ಣನೆಯ ಬಿಳುಪು,
ದೂರದಲಿ ಕಾಣಿಸಿದೆ ಎಂಥದೋ ಹೊಳಪು.
ಅಬ್ಬಬ್ಬ ನೋಡಲ್ಲಿ ಮಲ್ಲಿಗೆಯ ಮಾಲೆ,
ಇರುವಂತಿದೆ ಮಲ್ಲಿಗೆಗೂ ಪಾಠಶಾಲೆ.
ಮರೆತೆ ಹೋಗಿರುವೆ ನಾ ಬಂದಿರುವ ದಾರಿ,
ಹೋಗುವುದೆಂತೀಗ ನಾವು ಹಿಂದಿರುಗಿ ಹಾರಿ.?
ದೂರದಾ ರವಿಯತ್ತ ಕೈಸನ್ನೆ ಮಾಡು,
ಅವನೆತ್ತ ನೋಡುವನೋ ನೀನತ್ತ ನೋಡು.
ಹಾರುವಾ ಸಮಯದಲಿ ಮರೆಯದಿರು ನನ್ನ,
ಪುಟಾಣಿ ಚಿಟ್ಟೆ ನಾ ಅಪ್ಪಿರುವೆ ನಿನ್ನ. :-)
No comments:
Post a Comment
Hey, did you just want to say something?