Monday, August 24, 2009

ಕನಸು


ಇಂದಿಗೆ ಇಷ್ಟೇ ..!ಈಗ ಮುಳುಗುವನು ಸೂರ್ಯ.
ಇನ್ನೆಲ್ಲ ಬರಿಯ ಚಂದ್ರನದೇ ಕಾರ್ಯ.
ತಾರೆಗಳ ಜೋಡಣೆಯಲ್ಲಿರಬಹುದಾ ರಹಸ್ಯ..?
ನನಗಂತೂ ತಿಳಿದಿಲ್ಲ ನನ್ನಯಾ ಭವಿಷ್ಯ.

ಕನಸುಗಳು ತಲೆಯಾಚೆ ಮೇಲೆದ್ದು ಬಂದು,
ಕೂಗುವುದು ಕೇಳಿಸಿತು ಆಗಸದಿ ನಿಂದು.
"ನಾವಲ್ಲ ನೋಯಿಸುವ ಕಣ್ಣೀರ ಬಿಂದು,
ಜನನವಷ್ಟೇ ನಮಗೆ ಸಾವಿಲ್ಲವೆಂದೂ .!

ಜನಿಸುತಿವೆ ಕನಸುಗಳು ದೈತ್ಯ ಫೀನಿಕ್ಸ್ ನಂತೆ ,
ಜೊತೆಗೆ ತಿಳಿಯದಿಹ ಪ್ರಶ್ನೆಗಳ ಸಂತೆ.
ಪ್ರಶ್ನೆಗಳ ಪೋಣಿಕೆಯೋ ಅದು ಜೇಡರ ಬಲೆಯು,
ಕರಗತವಾಗಿಲ್ಲವೆನಗೆ ಅದ ಬಿಡಿಸುವಾ ಕಲೆಯು.

ಕನಸುಗಳು ಕೆಳಗಿರುವ ಭೂಮಿಯಂತೆ,
ಆಸೆಗಳು ಕೆಳಬೀಳೋ ಸೇಬಿನಂತೆ.
ನಡು ನಡುವೆ ಏನೇನೊ ಅನಿಶ್ಚಿತತೆಯಂತೆ,
ಮನದೊಳಗೆ ಆಗಾಗ ಅದರದೇ ಚಿಂತೆ.

ಮುಂಬರುವ ಉತ್ತರಗಳಾಗಬಹುದು ಬರಿಯ ಸಮೀಕ್ಷೆ,
ಇದಾಗಿರಬಹುದು ಬರಿಯ ಜೀವನ ಪರೀಕ್ಷೆ.
ಆದರೂ ಗೂಡೊಳಗಿನ ಹಕ್ಕಿಯಾ ಹಾಗೆ,
ನಂಬಿರುವೆ ನಾ ಕಾದಿರುವೆ ಹೀಗೆ.

ಬೆಳಕ ಸೂರ್ಯನು ಇಂದು ಬಹು ಬೇಗ ಬಂದ,
ಹೋಗುತಿರೆ ಚಂದ್ರನು ಅದೇನೋ ಅಂದ,
"ನನಸಾಗಿಸು ನಾ ಕೊಟ್ಟ ನೂರು ಕನಸ,
ತಡರಾತ್ರಿ ಬರುವೆನು ಹೊತ್ತು ಇನ್ನೂರು ಕನಸ".

ಚಂದ್ರನೂ ಮುಗಿದಂತೆ ಮುಗಿಯಿತೀ ರಾತ್ರಿ,
ಸೂರ್ಯನಿಗೆ ದಿನವಿಡೀ ಕೆಲಸವಾಯ್ತು ಖಾತ್ರಿ.
ನನ್ನ ಕೆಲಸವೂ ಇಹುದು ಬಹಳಷ್ಟು ಇನ್ನೂ,
ದೂರ ಬೆಟ್ಟದಲಿಲ್ಲ ಮೆಟ್ಟಿಲುಗಳಿನ್ನೂ ..!:-)

-- Apoorva Chandra.P

3 comments:

Hey, did you just want to say something?