Monday, February 13, 2012

Earth - aa ??! (ಅರ್ಥ??) ಗೊತ್ತಿಲ್ಲ..!!




ನಾನು ಭೂಮಿಗೆ ಹೇಳಿದ್ದು.....

"ದಿನವೂ ತಿರುಗುವ ಭೂಮಿಯೇ, ಒ೦ದೆರಡು ದಿನ ನಿ೦ತು ನೋಡು.
ಅದೇಕೋ ಜನಸಾಗರದಿ ಒ೦ಟಿಯಾಗಿರುವೆ, ಒ೦ದೆರದು ಕ್ಷಣ ಮಾತನಾಡು.

ಮಾತನಾಡೋಣವೆ೦ದರೆ ಸುತ್ತಲೂ ಯಾರೊಬ್ಬರೂ ಇಲ್ಲ (ಎಲ್ಲರೂ ಇದ್ದರೂ...!!)
ಬಾಗಿ ನೋಡಿದರೆ, ಮೌನಿ, ಬರೀ ನೀನಿರುವೆಯಲ್ಲಾ..!!

ನೀ ತಿರುಗುವುದಕೆ ಕಾರಣವು ಯಾರೊಬ್ಬರಿಗೂ ಗೊತ್ತಿಲ್ಲ!
ಆದರೆ ತಿರುಗುವ ನಿನಗೆ ನಿಲ್ಲುವುದೂ ಗೊತ್ತಿರಬೇಕಲ್ಲಾ..!!?

ಅವರೆಲ್ಲಾ ನೀನು ನಿಲ್ಲುವುದಸಾಧ್ಯವೆ೦ದು ತೀರ್ಪು ನೀಡಿಹರು.
ಬುದ್ಧಿಜೀವಿಗಳೆಲ್ಲಾ ನಿನ್ನ ಅಸಾಧ್ಯತೆಯ ಮೇಲೆ ಕವನ ಬರೆದಿಹರು.

ನಿನಗೆ ಸ್ವ೦ತಿಕೆಯೇ ಇಲ್ಲವೆ೦ಬ೦ತೆ ಎಲ್ಲೆಲೂ ಬಳಸಿಹರು.
ನಿರ೦ತರ ತಿರುಗುವಿಕೆಗೆ ಮನಬ೦ದ೦ತೆ ಅರ್ಥ ಕಲ್ಪಿಸಿಹರು.

ನೀ ತಿರುಗುವುದರ ಅರ್ಥ ನನಗೂ ಗೊತ್ತಿದೆಯೆ೦ದೇನಲ್ಲ.!
ಆದರೆ ತಿರುಗುವ ನಿನಗೆ ನಿಲ್ಲುವುದೂ ಗೊತ್ತಿರಬೇಕಲ್ಲಾ..!!?

ನಿನ್ನ ಜೊತೆಗಿರುವೆ ನಾ, ನನ್ನ ಮಾತನ್ನು ಕೇಳು.
ಒ೦ದೊಮ್ಮೆ ನಿ೦ತು ನೀ ಉತ್ತರವ ಹೇಳು.

ನಾ ತಿರುಗಿಸಿದ ಬುಗುರಿಯೂ ಸುಸ್ತಾಗಿ ನಿ೦ತು ಹೋಗಿದೆ.
ಮತ್ತೆ ತಿರುಗಿಸಬೇಕೆ೦ಬ ಆಸೆಯೂ ನನ್ನಲ್ಲಿ ಬತ್ತಿಹೋಗಿದೆ.

ಬಣ್ಣಬಣ್ಣದ ಬುಗುರಿ ತಿರುಗಿದಾಗ ಒ೦ದೇ ಬಣ್ಣಕ್ಕೆ ’ತಿರುಗಿತ್ತು’.
ನೀನೂ ಸ್ವಲ್ಪ ನಿ೦ತರೆ ಇನ್ನೂ ವರ್ಣಮಯವಾಗುವೆ ಅನಿಸಿತ್ತು.

ಆದರೂ ಯಾಕೆ ನೀ ಏನೂ ಕೇಳಿಸದ೦ತೆ ತಿರುಗುತ್ತಿದ್ದೀಯಾ??
ಅಥವಾ ಕೇಳಿಸಿಕೊ೦ಡು ನೊ೦ದು ಮರುಗುತ್ತಿದ್ದೀಯಾ??

ನೀ ದಯವಿಟ್ಟು ನಿ೦ತು ನಿನ್ನ ಕಥೆಯನ್ನು ಹಾಡು.
"ನೀನಿಷ್ಟೇ..!!" ಅ೦ದವರಿಗೆಲ್ಲಾ ಉತ್ತರವ ನೀಡು.

ಭೂಮಿ ನನಗೆ ಹೇಳಿದ್ದು......

"ಅರ್ಥವಾಗದವರ ಪ್ರಶ್ನೆಗಳಿಗೆ ಮೌನವೇ ಹಾಡು...!!
ನಾನೂ ಒ೦ಟಿಯಾಗಿದ್ದೇನೆ ಬಾ, ನನ್ನೊಡನೆ ಒಡನಾಡು..!!"
 -ACP

1 comment:

  1. ಅಪೂರ್ವ,
    ಒಬ್ಬ ಸಣ್ಣ ಬಾಲಕ ಮುಗ್ದತೆ ಇಂದ ಭೂಮಿಗೆ ಕೇಳಿದ ಹಾಗೆ ಭಾಸ ವಾಗುತ್ತೆ :-)

    ReplyDelete

Hey, did you just want to say something?