[Here's a vague translation attempt of 'Hotel California' by Eagles into Kannada. Link to original video of live performance from 1977: https://www.youtube.com/watch?v=09839DpTctU ]
೧೯೭೬ ರಲ್ಲಿ ಬಿಡುಗಡೆಯಾದ ಜನಪ್ರಿಯ ಈಗಲ್ಸ್ ಎಂಬ ಇಂಗ್ಲಿಷ್ ವಾದ್ಯವೃಂದದ ಜಗತ್ಪ್ರಸಿದ್ದ ಹೋಟೆಲ್ ಕ್ಯಾಲಿಫೋರ್ನಿಯಾ ಎಂಬ ಹಾಡಿನ ಅನುವಾದದ ಪ್ರಯತ್ನ ]
----------------------------------------------------------------------------------------------------------------------
ಮರುಭೂಮಿಯೊಂದರ ಕರಾಳ ಹೆದ್ದಾರಿಯೊಂದರಲಿ
ತಂಪಾಗಿಹುದೆನ್ನ ಶಿರವು ತಂಗಾಳಿಯಲಿ
ಅದೇನೋ ಮಧುರ ಸುವಾಸನೆಯೊಂದು
ಮತ್ತೇರಿಸಿಹುದು ತಂಗಾಳಿಯ ಜೊತೆಬಂದು
ದೂರದಲಿ ಕಂಡಿಹುದೆನಗೊಂದು ಬೆಳಕು, ಮಿನುಗುವ ಬಣ್ಣ
ತಲೆಯಾಗಿಹುದು ಭಾರ, ಮಬ್ಬಾಗಿಸಿಹುದು ಕಣ್ಣ
ಆಗಿಹುದಾದಾಗಲೇ ಅಹೋರಾತ್ರಿ
ಇಲ್ಲೇ ತಂಗಬೇಕೆಂಬುದೆನಗೆ ಖಾತ್ರಿ
ಅಲ್ಲೇ ಹೊಸ್ತಿಲ ಬಳಿ ನಿಂತಿದ್ದಳಾಕೆ
"ಆಗಲೇ ಗಂಟೆಯ ಸದ್ದೊಂದು ಕೇಳಿಸಿದ್ದೇಕೆ?"
"ಇದು ಸ್ವರ್ಗವೋ ನರಕವೋ?", ಮನದಲೊಂದು ಶಂಕೆ!
ಅಷ್ಟರಲೇ ಬೆಳಗಿಸಿದವಳೊಂದು ಮೋಂಬತ್ತಿ
"ಇಗೋ ಇದೇ ನಿನ್ನ ದಾರಿ" ಎಂದಳು ಕೈಯೆತ್ತಿ
ಮುನ್ನಡೆದರೊಂದು ವಿಸ್ತಾರವಾದ ಕಾಲುದಾರಿ
ಅದರುದ್ದಕ್ಕೂ ಯಾರೋ ಅಂದಂತಿತ್ತು ಬಾರಿ ಬಾರಿ -
"ಹೋಟೆಲ್ ಕ್ಯಾಲಿಫೋರ್ನಿಯಾ ಗೆ ಸುಸ್ವಾಗತವು ನಿಮಗೆ
ಸುಂದರ, ನಯನ ಮನೋಹರ ಜಾಗದ ಒಳಗೆ
ಪ್ರಿಯ ಮುಖಗಳೂ ಉಳ್ಳ ಜಾಗದ ಬಳಿಗೆ
ಅಸಂಖ್ಯ ಕೋಣೆಗಳಿವೆ ಹೋಟೆಲ್ ಕ್ಯಾಲಿಫೋರ್ನಿಯಾ ದಲ್ಲಿ
ಬರಬಹುದು ತಂಗಲು ವರ್ಷವಿಡೀ ನೀವಿಲ್ಲಿ!"
ತಿರುಚಿದ ಮನವವಳದು - ತುಂಬಿಹುದು ಆಸೆ, ಸಿರಿತನದ ದರ್ಬಾರು
ಹಾಗೆಯೇ ಜೊತೆಗಿಹುದು ದುಬಾರಿ ಮರ್ಸಿಡಿಸ್ ಕಾರೂ
ಜೊತೆಗಿರುವ ಸುಂದರ ಯುವಕರೆಲ್ಲಾ ಈಕೆಯದೇ ಸ್ನೇಹಿತರಂತೆ
ಬೇಸಿಗೆಯ ಬೆವರಿನ ಸುಗಂಧದೊಂದಿಗೆ ಅಂಗಳದಲೆಲ್ಲಾ ಕುಣಿದಂತೆ,
ಕೆಲ ಹೆಜ್ಜೆಗಳು ನೆನಪಿನಲಿ ಅಚ್ಚನೊತ್ತುವಂತಹವೂ, ಕೆಲವು ಅಷ್ಟೇ...ಸುಮಾರು!
ಅಂತೂ ಇಂತೂ ಒಟ್ಟಿನಲ್ಲಿ ಇವರದೇ ಇಲ್ಲಿ ಕಾರುಬಾರು
ಹೀರೋಣವೆಂದೆನಿಸಿ ಒಂದಷ್ಟು ವೈನು, ಕರೆದೆ ನಾ ಕ್ಯಾಪ್ಟನ್ ನನು ಮಧ್ಯ
ಆತನೆಂದ "೧೯೬೯ ರಿಂದಲೂ ನಮ್ಮಲ್ಲಿಲ್ಲ ಸ್ವಾಮೀ ಈ ಮದ್ಯ!"
ಇಂದಿಗೂ ಆ ಹಳೆಯ ಧ್ವನಿಗಳಿನ್ನೂ ದೂರದಿಂದಲೇ ಕರೆಯುತ್ತಿವೆ
ಮಧ್ಯರಾತ್ರಿಯಲೆಚ್ಚರಿಸಿ ಕಿವಿಯ ಬಳಿಯಲದೇ ಹಾಡ ಗುನುಗುತ್ತಿವೆ
"ಹೋಟೆಲ್ ಕ್ಯಾಲಿಫೋರ್ನಿಯಾ ಗೆ ಸುಸ್ವಾಗತವು ನಿಮಗೆ
ಸುಂದರ, ನಯನ ಮನೋಹರ ಜಾಗದ ಒಳಗೆ
ಪ್ರಿಯ ಮುಖಗಳೂ ಉಳ್ಳ ಜಾಗದ ಬಳಿಗೆ
ಅದೆಂತಾ ಸಂಭ್ರಮವು ಹೋಟೆಲ್ ಕ್ಯಾಲಿಫೋರ್ನಿಯಾದಲ್ಲಿ
ಅದೇನೋ ಆಶ್ಚರ್ಯಗಳು ಹೋಟೆಲ್ ಕ್ಯಾಲಿಫೋರ್ನಿಯಾದಲ್ಲಿ
ಇದ್ದರೂ ಇಲ್ಲದಂತಿಹುದು ಅದೇಕೋ ಈ ಜಾಗದಲ್ಲಿ!”
ಕನ್ನಡಿಗಳ ಸಾಲು ಮೇಲ್ಛಾವಣಿಯ ಮೇಲೇನು?!
ಐಸಿನ ಮೇಲೆ ಸುರಿದಿಹರು ಗುಲಾಬಿ ಶಾಂಪೇನು
ಯಜಮಾನನ ಕೊಠಡಿಯಲದಾಗಲೇ ಸವಿಯೂಟ ಅಣಿಯಾಗಿತ್ತು
ಒಮ್ಮೆಲೇ ಅವಳು "ನಮ್ಮದೇ ಕರ್ಮದ ಖೈದಿಗಳು ನಾವಿಲ್ಲಿ' ಅಂದಂತಿತ್ತು
ರಕ್ಕಸನೊರ್ವನ ಮಟ್ಟಹಾಕಬೇಕಾಗಿತ್ತು ಅದೆಲ್ಲದರ ಮೊದಲು
ಉಕ್ಕಿನ ಚಾಕುಗಳಿಂದ ತಿವಿದರೂ ಸಾಯಲಿಲ್ಲ - ಬರೀ ರೂಪ ಬದಲು
ಅದೇ ಕೊನೆಯ ನೆನಪು, ಓಡಿದ್ದೆ ಛಲಬಿಡದೆ ನಾ ಬಾಗಿಲಿನ ಕಡೆಗೆ
ಹುಡುಕಬೇಕಿತ್ತು ಒಳಬಂದ ಕಾಲುದಾರಿ ಹೋಗಲು ಹಿಂದೆ ನಾನಿದ್ದೆಡೆಗೆ
"ಶಾooooತಿ ..." ಎಂದ ಕಾವಲುಗಾರ ಇನ್ನೇನೋ ಹೀಗೆ ಹೇಳಿದ್ದ ಕೊನೆಗೆ
"ಬರಮಾಡಿಕೊಳ್ಳುವುದಷ್ಟೇ ನಮಗರಿತುರುವ ಕಾರ್ಯ, ನಿಮ್ಮನ್ನು ಅಲ್ಲಿಂದ
ನಿಮಗಿಷ್ಟ ಬಂದಾಗ ಹೋಗಬಹುದು ಆದರೆ ನಿರ್ಗಮಿಸುವುದಸಾಧ್ಯ ಇಲ್ಲಿಂದ!"