ಚಂಡಿ
ಇದೊಂದು ನವ ನಿಮಿಷಗಳ ನವರಸ ಕಥನ ಕಾವ್ಯ
ಉತ್ತರ ಲಂಡನ್ ನ ಉತ್ತುಂಗ ಫ್ಲಾಟ್ ಒಂದರಲಿ
ಬಿಳಿ ನೆಲ, ಬಿಳಿ ಬೆಕ್ಕು, ಬಿಳಿ ಗೋಡೆಯ ಮಧ್ಯದಲ್ಲಿ
ತೆಳು ಹಲಗೆಯ ಬಹುರೂಪಿ ರಚನೆಗಳು,
ಮಹತ್ವಾಕಾಂಕ್ಷೆಯ ಮಾಡರ್ನ್ ಆರ್ಟ್ ಚಿತ್ರಗಳು!
ವೈದ್ಯರೋರ್ವರು ಸಮ್ಮೇಳನದ ಆಯೋಜಕರು
ಅರಿವುಳ್ಳವರು, ತಮ್ಮದೇ ಕ್ಲಿನಿಕ್ ಕೂಡಾ ಹೊಂದಿಹರು.
ಗೆಳತಿಯೋ ಖ್ಯಾತ ನಟಿ, ಅವರೂ ಜೊತೆಗಿಹರು.
ನಮ್ಮೂರ ಪರಿಚಯ, ಊಟಕ್ಕೆ ನಮ್ಮಿಬ್ಬರನ್ನೂ ಕರೆದಿಹರು.
೫ನೆಯ ಅಥಿತಿಯು ಯಾರೋ ಅಪರಿಚಿತೆ
ಜೊತೆ ನಿಂತಿರುವಳು ಆಗಲೆಂದು ಪರಿಚಿತೆ
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ದಿಂದ ಲಂಡನ್ ಗೆ ಬಂದಿರುವಳಂತೆ
ಯಾರದೋ ತಂಗಿಯೋ, ಅಕ್ಕನೋ, ಹಾಗೇನೋ ಸಂಬಂಧವಂತೆ
ಪರಿಚಯದ ಮಾತು ಸುಮ್ಮನೇ ನಡೆದಿತ್ತು
ಅವಳ ಸೌಂದರ್ಯವೋ ಕಣ್ಣಿಗೇ ನಾಟಿತ್ತು
ಹೊಳೆವ ಕಪ್ಪು ಕೂದಲೂ, ಕಡುಗಪ್ಪು ಕಣ್ಣಿತ್ತು
ಅಪ್ರತಿಹಿತ ಬಣ್ಣಗಳು ಕಣ್ಮುಂದೆ ಕಂಡಿತ್ತು
ಆದರೇಕೋ ಕುಳಿತಿರೆ ಅವಳು ನಮ್ಮ ಮುಂದೆ
ಎಚ್ಚರಿಕೆಯ ಕರೆಗಂಟೆಯೊಂದು ಬಾರಿಸಿದಂತಿತ್ತು ಹಿಂದೆ
ಗಮನಿಸಿದೆ ಕಾಲ್ಪನಿಕ ಯಕ್ಷಿಯೊಂದರ ರೆಕ್ಕೆಯ ತುದಿ
ಹಚ್ಚೆಯಾಗಿ ಬೆನ್ನಿನಲ್ಲಿ ಪಕ್ಕೆಲುಬಿನ ಬದಿ
''ನನ್ನದು ಧನು ರಾಶಿ!'' ಎಂದೊಡನವಳು ನಮ್ಮತ್ತ ನೋಡಿ,
ಭ್ರಮಾಜೀವಿ ಇವಳೇನೋ ಎಂಬ ಶಂಕೆ, ಕುಂದಿತ್ತು ಮೋಡಿ
ಪರಿಚಯಕೆ ಇರಲೆಂದು ಕೇಳಿದೆವು ''ಏನು ನಿನ್ನಯ ಹೆಸರು?''
ಅದೇನೋ ಅಂದಳು ಅಸ್ಪಷ್ಟ - ಚಂಡಿ? - ಚಂಡಮಾರುತದ ಉಸಿರು!
ಸಂಭಾಷಣೆಯು ಮೊದಲಾಗಿತ್ತು ಹೀಗೆಯೇ ಹಾಸ್ಯಮಯ ಲೋಕಾಭಿರಾಮ
ಸಂಭ್ರಮದ ಮಾತುಗಳೂ ನಂತರ ಸ್ವಲ್ಪ ವಿರಾಮ
ಒಂದಷ್ಟು ದುಬಾರಿ ವೈನ್ ಅನ್ನು ಹೀರಿ
ಯಾವುದೋ ಸಾಮಾನ್ಯ ವ್ಯಾಖ್ಯೆಯ ಮೇಲೇರಿ
''ಎಲ್ಲವನ್ನೂ ನಾವರಿಯುವುದಸಾಧ್ಯ, ಜ್ಞಾನವು ಕೇವಲ ಅಭಿಪ್ರಾಯ, ಅವ್ಯಕ್ತ''
ಎಂದಾಕೆಯ ಧೃಡ ಅಭಿಪ್ರಾಯ ವ್ಯಕ್ತ
''ಸಮ್ಮೇಳನದ ಶುಭಾರಂಭವಂತೂ ಅಲ್ಲ'' ಅಂದುಕೊಂಡೆ ಮೆಲ್ಲ
ಇನ್ನೂ ಊಟವೇ ಆಗಿಲ್ಲವಲ್ಲ, ಅನಗತ್ಯ ವಾದ ವಿವಾದಗಳು ಸಲ್ಲ
ಎಲ್ಲವನ್ನೂ ಸುಮ್ಮನೇ ಅವಲೋಕಿಸುತಲಿದ್ದ ಮಡದಿ
ಸುಮ್ಮನಿರೆಂದು ಕಣ್ಸನ್ನೆ ಮಾಡಿದಳು ದೂರದಿ
ಕೇಳಬೇಕೆಂದುಕೊಂಡೆ, ''ಎಲೈ ಚಂಡಿ, ಜ್ಞಾನ ಬಾರಿಯ ಅಭಿಪ್ರಾಯವೆಂದಾದರೆ
ಎರಡಂತಸ್ತಿನ ಮನೆಯ ಬಾಗಿಲಿನ ಬದಲು ಕಿಟಕಿಯಿಂದ ಹೊರಹೋಗುವೆಯಾ ಹಾಗಾದರೆ?''
ಸುಮ್ಮನಿರುವುದು ಕಷ್ಟವಾದರೂ ಸುಮ್ಮನೆ ಕುಳಿತೆ
ಮಡದಿಯ ಎಚ್ಚರಿಕೆಯ ನಿರ್ಲಕ್ಷಿಸದಿರುವುದು ಒಳಿತೇ
ಊಟ ಕೊನೆಗೂ ಶುರುವಾಗಿತ್ತು
ಮೃಷ್ಟಾನ್ನ ಭೋಜನ ಎಲ್ಲರಿಗೂ ಹಿಡಿಸಿತ್ತು
ಜೊತೆ ಕುಳಿತಿದ್ದ ಚಂಡಿ ಜಗಿಯುತಿರೆ ಸಾಂಬಾರಿನಲ್ಲಿದ್ದ ನುಗ್ಗೆ,
ಬಳಿಯಿದ್ದ ವೈದ್ಯರು ವಿವರಿಸುತಿರೆ ವೈದ್ಯಕೀಯ ಇತಿಹಾಸದ ತುಣುಕೊಂದರ ಬಗ್ಗೆ,
''ಮಾನವ ದೇಹವೆಂಬುದೊಂದು ರಹಸ್ಯವಷ್ಟೇ ಬರೀ
ಆತ್ಮದ ವಿಚಾರಕ್ಕೆ ಬಂದರೆ ವಿಜ್ಞಾನ ನಿಷ್ಪ್ರಯೋಜಕವೇ ಸರಿ
ವಿಜ್ಞಾನ ಕಳೆದುಹೋಗುವುದು ತಳವಿಲ್ಲದ ಬಾವಿಯಲಿ''
ಎಂದೊಮ್ಮೆಲೇ ಅರಚಿದಳು ಚಂಡಿ ಮಧ್ಯದಲಿ!
ಸಭಾಂಗಣದ ಪರಿಚಿತ ಸಿಬ್ಬಂದಿಯೊಬ್ಬಳು ದೂರದಲಿ ನೋಡುತಿದ್ದಳು
ನನ್ನ ವಿರಳ, ಮೋಜುಭರಿತ ಭಾಷಣವೊಂದರ ಆರಂಭದ ನಿರೀಕ್ಷೆಯಲಿದ್ದಳು.
ಆದರೆ ನನ್ನ ತುಟಿಗಳು ಹೊಲಿಯಲ್ಪಟ್ಟಿವೆ, ಮಡದಿಯ ಆದೇಶದಂತೆ
ಊಟದ ಸವಿಯನಷ್ಟೇ ಆಸ್ವಾದಿಸಬಯಸುವೆನೀಗ, ಕಿವುಡನಂತೆ.
ಕೆರಳಿಸುವ, ದೋಣಿಯನುರುಳಿಸುವ ಸರ್ವಪ್ರಯತ್ನವೂ ಚಂಡಿಯದು
ಕಷ್ಟವಾದರೂ ಮೌನವಾಗಿರುವೆ, ದಡಸೇರುವ ಗುರಿಯಷ್ಟೇ ನನ್ನದು
ನನಗಿರುವ ಕಾಳಜಿಯೇನೂ ಚಂಡಿಗಿರುವಂತಿಲ್ಲ
ದೋಣಿಯುರುಳುವ ಪರಿವೆಯೂ ಇದ್ದಂತಿಲ್ಲ
''ಔಷಧ ಕಂಪೆನಿಗಳೆಲ್ಲ ನಮ್ಮ ವೈರಿಗಳು
ಔಷಧಾವಲಂಬನೆಯನುತ್ತೇಜಿಸುವ ಮಾರಿಗಳು
ನೈಸರ್ಗಿಕ ಪರಿಹಾರಗಳಷ್ಟೇ ದೇಹಕ್ಕೆ ಸಾಕು
ಈ ಔಷಧಗಳೆಲ್ಲಾ ಏತಕ್ಕೆ ಬೇಕು?
ಗಿಡಮೂಲಿಕೆಗಳೇ ಪರಿಹಾರ ಎಲ್ಲದಕು
'ರಾಸಾಯನಿಕಗಳು' ಬೇಡವೇ ಬೇಡ ಯಾವುದಕೂ
ಹೋಮಿಯೋಪತಿ ಸರಿಮಾಡದ ಸಮಸ್ಯೆ ಏನಿದೆ?
ನೈಸರ್ಗಿಕ ಪರ್ಯಾಯ ವೈದ್ಯಕೀಯ ವ್ಯವಸ್ಥೆಗೆ ನಾವು ಮರಳಬೇಕಿದೆ!''
ಮತ್ತೆ ನುಡಿದಳು ಚಂಡಿ ಹೀಗೆಂದು.
ನಾನೀಗರಿಯೆ ಸುಮ್ಮನಿರುವುದು ಹೇಗೆಂದು!
ಮನದ ಶಾಂತಿಯ ತಡೆಗೋಡೆಯಲಿಂದು
ಕಾಣಿಸಿದೆ ಸಣ್ಣ ಬಿರುಕಿನ ಕುರುಹೊಂದು
''ಇಂತಿಷ್ಟು ಸುಮ್ಮನೇ ಬುದ್ಧಿಜೀವಿಯಂತೆ ಮಾತನಾಡಿರುವೆ ನೀನು
'ಪರ್ಯಾಯ ಔಷಧ'? ಅದರರ್ಥ ಗೊತ್ತೇನು?'' ಪ್ರಾರಂಭಿಸಿದೆ ನಾನು
''ಯಾವ ಔಷಧಕೆ ಇಹುದೋ ಪುರಾವೆ ಕೆಲಸ ಮಾಡುವುದಿಲ್ಲವೆಂದು,
ಯಾವ ಔಷಧಕೆ ಇಲ್ಲವೋ ಪುರಾವೆ ಕೆಲಸ ಮಾಡುವುದೆಂದು
ಅದೇ ಕರೆಯಲ್ಪದುವು 'ಪರ್ಯಾಯ ಔಷಧ'ವೆಂದು''.
''ಕೆಲಸ ಮಾಡುವುದೆಂದು ಪುರಾವೆ ಇರುವ 'ಪರ್ಯಾಯ ಔಷಧ'ಕ್ಕೇನೆನ್ನುತ್ತಾರೆಂದು ಗೊತ್ತೇನು ನಿನಗೆ?''
''ಔಷಧ!''
ಹ್ಹ! ಉಸಿರುಗಟ್ಟಿಹೋಗಿತ್ತು ಎನಗೆ
ಅಷ್ಟಕ್ಕೇ ಸುಮ್ಮನಾಗುವಳಲ್ಲ ಚಂಡಿ
ತೋಡುತಿದ್ದಳು ಇನ್ನೂ ಆಳದ ಗುಂಡಿ.
''ನೈಸರ್ಗಿಕ ಪರಿಹಾರಗಳಲ್ಲಿ ನಂಬಿಕೆಯೇ ಇಲ್ಲವೇ ನಿನಗೆ ಹಾಗಾದರೆ?'' ಮುಂದಿನ ವಾದದ ಮುನ್ನುಡಿಗೆ,
ಪ್ರಶ್ನೆಯೊಂದು ನುಗ್ಗಿತ್ತು ನನ್ನೆಡೆಗೆ.
ಚಂಡೀ ಕೇಳು,
''ಚಹಾಗೆ ಬರುವುದಕ್ಕೂ ಮುಂಚೆ ಇಲ್ಲಿ
ಸೇವಿಸಿದ್ದೆ ನೈಸರ್ಗಿಕ ಔಷಧವೊಂದ ಮನೆಯಲ್ಲಿ
ಉತ್ಪಾದಿಸಿಹರು ಈ ಮಾತ್ರೆಯ ಉಪಯೋಗಿಸಿ ವಿಲ್ಲೋ ಮರ
ಕನಿಷ್ಠ ಅಡ್ಡ ಪರಿಣಾಮಗಳ, ಬಹುಪಯೋಗಿ ವರ
ಪ್ರಿಯತಮೆ, ಏನದರ ಹೆಸರು? ಹಾ.. ಮಾಸ್ಪಿರಿನ್
ಅಲ್ಲಲ್ಲ..... ಬಾಸ್ಪಿರಿನ್
ಒಹ್ ಈಗ ಹೊಳೆಯಿತು, ಔಷಧದಂಗಡಿಯಲಿ ೧ ರುಪಾಯಿಗೆ ಕೊಂಡಿದ್ದು - ಆಸ್ಪಿರಿನ್!''
ವಾದವು ಸಂಕ್ಷಿಪ್ತವಾಗಿ ತಗ್ಗಿದಂತಿತ್ತು
ಅರಿವು ಮೂಡಿತೇನೋ ಎಂದೊಮ್ಮೆ ಅನಿಸಿತ್ತು
ಊಟದ ತಟ್ಟೆಗಳನ್ನು ಹಿಂದಿರುಗಿಸಿ ಸಿಹಿತಿಂಡಿಯು ಬರಲೆಂದೆಲ್ಲರ ಅನುಮೋದನೆ.
ಅಷ್ಟರಲೇ ಶುರು ಚಂಡಿಯ ಮುಂದಿನ ಪ್ರತಿಪಾದನೆ.
''ಷೇಕ್ಸ್ಪಿಯರ್ ಹೇಳಿದ್ದನೆಂದೆನಿಸುತ್ತದೆ..'' ಮುಂದುವರಿದವು ಮತ್ತೆ ಚಂಡಿಯ ಮಾತುಗಳು
''ನಿನ್ನ ತತ್ವಶಾಸ್ತ್ರಕ್ಕಿಂತ ಮಿಗಿಲಾದುದಿದೆ ಭುವಿಯಲೂ, ಸ್ವರ್ಗದಲೂ
ವಾಸ್ತವವ ನೋಡುವ ಒಂದು ಪರಿಯಷ್ಟೇ ವಿಜ್ಞಾನದಿಂದ ಸಾಧ್ಯ
ಪ್ರೀತಿಯನು, ಅಧ್ಯಾತ್ಮವನು ವಿವರಿಸಲು ವಿಜ್ಞಾನಕ್ಕೆ ಅಸಾಧ್ಯ
ಅತೀಂದ್ರಿಯ ಜ್ಞಾನಿಗಳ ಬಗ್ಗೆ ವಿಜ್ಞಾನಕ್ಕೇನು ಗೊತ್ತು?!
ಪುನರ್ಜನ್ಮ, ಪ್ರಾರ್ಥನೆಗಳನ್ನು ವಿವರಿಸಬಲ್ಲುದೆ ಈ ಹೊತ್ತು?''
ಹಠಾತ್, ನಾನೇಕೋ ದಿಟ್ಟಿಸಿ ಕಣ್ಣು ಮಿಟಿಕಿಸದೆ ನೋಡುತ್ತಿದ್ದೇನೆಂದೆನಿಸಿತ್ತು
ಮಧ್ಯರಸ್ತೆಯಲಿ ಕಣ್ಣುಕೊರೆಯುವ ಹೆಡ್ ಲೈಟ್ ನಲಿ ಸಿಕ್ಕಿದ ಮೊಲದಂತನಿಸಿತ್ತು
ಹ್ಯಾಮ್ಲೆಟ್ ನ ತಪ್ಪಾದ ಉಲ್ಲೇಖ ಮಾಡಿಹಳೆಂಬ ಸಂಶಯವೂ ಬಂದಿತ್ತು
ಅಥವಾ ೮ನೇ ವೈನ್ ಗ್ಲಾಸ್ ನ ಪ್ರಭಾವವೋ ತಿಳಿಯದಾಗಿತ್ತು
ನನ್ನ ಶಾಂತಿಯ ಗೋಡೆಯೋ ಈಗ ಸಂಪೂರ್ಣ ಒಡೆದಿತ್ತು
ಎಳೆದು ಕಟ್ಟಿರುವ ಅಶ್ವವನು ಒಮ್ಮೆಲೇ ಬಿಡುಗಡೆಗೊಳಿಸಿದಂತಾಗಿತ್ತು
ನಾನಂದೆ,
''ನೋಡು ಚಂಡಿ, ನಿನಗೆ ಬೋರು ಹೊಡೆಸುವ ಯಾವ ಉದ್ದೇಶವೂ ನನಗಿಲ್ಲ
ಆದರೆ ಕೇಳು, ಅತೀಂದ್ರಿಯ ಜ್ಞಾನಿಗಳೆಂದು ಯಾರೂ ಇಲ್ಲ.
ಭವಿಷ್ಯ ನುಡಿಯುವವರೂ, ಕೈ ಓದುವವರೂ, ಯಾವ ವಿಶೇಷ ಇಂದ್ರಿಯಗಳನೂ ಹೊಂದಿಲ್ಲ
ದೇವರ ಕರೆಯ ಕೇಳಬಲ್ಲೆನೆಂಬವನೂ ಅಷ್ಟೇ ಬಹು ದೊಡ್ಡ ಸುಳ್ಳ
ಆಧ್ಯಾತ್ಮದಿಂದ ರೋಗ ನಿವಾರಣೆ ಮಾಡುವೆನೆಂಬವನು ಬಹು ದೊಡ್ಡ ಕಳ್ಳ''
''ಅಂದ ಹಾಗೆ,
ಸತ್ತವರ ಜೊತೆ ಮಾತನಾಡಬಲ್ಲೆವೆಂದು ನಂಬಿಸುತ್ತಾರಲ್ಲಾ
ಮಗುವ ಕಳೆದುಕೊಂಡು ಅಳುತಿರುವ ತಾಯಿಯೊಡನೆ ಸುಳ್ಳಾಡುತ್ತಾರಲ್ಲಾ
ಆ ಬದಿಯ ಪ್ರಪಂಚದ ಅರಿವು ನಮಗಿದೆಯೆಂದು ಹುಸಿನುಡಿಯುತ್ತಾರಲ್ಲಾ
ನಂಬುವೆಯಲ್ಲಾ ಈ ಮೂರ್ಖತನದ ಪರಮಾವಧಿಗಳನೆಲ್ಲಾ!''
'' ನೀನೇನು ಡಿಂಗ ನಿಜವಾಗಲೂ ಇರುವನೆಂದು ನಂಬುವೆಯಾ?
ಸಾಂತಾ ನಿಜವಾಗಲೂ ಉಡುಗೊರೆಯೊಂದಿಗೆ ಬರುವನೆಂದುಕೊಂಡಿರುವೆಯಾ?
ಮೈಕಲ್ ಜ್ಯಾಕ್ಸನ್ ನನಿಗೆ ಮುಖದ ಶಸ್ತ್ರಕ್ರಿಯೇ ನಡೆದಿಲ್ಲವೆಂದು ಪ್ರತಿಪಾದಿಸುವೆಯಾ?
ಸರ್ಕಸ್ ಗಳಲ್ಲಿ ತೋರಿಸುವ ಜಾದೂ ಕೂಡಾ ನಿಜವೆಂದು ಹೌಹಾರುವೆಯಾ?
ಸತ್ತವರೊಂದಿಗೆ ಮಾತನಾಡಬಲ್ಲೆವೆಂಬವರ ಮೂರ್ಖ ಮಾತುಗಳಿಗೆ ಬಲಿಯಾಗುವೆಯಾ?''
ಇಷ್ಟೆಲ್ಲಾ ಅಪಹಾಸ್ಯಕ್ಕೊಳಗಾದರೂ ಚಂಡಿ ಛಲಬಿಡುವಂತಿಲ್ಲ
ಬಂದೂಕಿನಿಂದ ಬರುವ ಗುಂಡುಗಳಂತಿರುವ ಕ್ಲೀಷೆಗಳಿಗೆ ಕೊನೆಯಿಲ್ಲ
''ಅಷ್ಟೊಂದು ಅಚಲವಾಗಿಹುದು ನಿನ್ನ ನಿಲುವು, ಖಚಿತ
ಮುಚ್ಚಿದ ಮನ ನಿನ್ನದು, ಸಂಕುಚಿತ
ವಿಜ್ಞಾನದಲಿರುವ ನಿನ್ನ ನಂಬಿಕೆಯು ಕುರುಡು
ಮೂಲಭೂತವಾದಿಗಳ ನಂಬಿಕೆಯಂತೆಯೇ ಬರಡು''
ಘೋಷಿಸಿದಳು ಹಾಗೆಂದು ಚಂಡಿ ಕಿರುಚಿ
ಹೇಳಿದ್ದೆಲ್ಲವನೂ ಮನಬಂದಂತೆ ತಿರುಚಿ
''ಹಾ...! ಅದೇನೋ ಸರಿಯಾದ ಅಂಶವೇ...ಯೋಚಿಸುವೆ ಒಂದಷ್ಟು ಹೊತ್ತು
ಚಂಡಿಯ ತರ್ಕವೂ ಸರಿಯಾಗಿರಬಹುದೇನೋ ಯಾರಿಗೆ ಗೊತ್ತು!''
.
.
ಒಹ್ ನಿಲ್ಲು ನಿಲ್ಲು...ಚಂಡೀ, ನೀ ನುಡಿದೆಯಲ್ಲಾ...
ನೂರಕ್ಕೆ ನೂರು ಶುದ್ಧ ಅಸಂಬದ್ಧ ಅದೆಲ್ಲಾ
''ವಿಜ್ಞಾನವು ಪುರಾವೆಗಳ ಆಧಾರದಂತೆ, ತನ್ನ ನಂಬಿಕೆಗಳನ್ನು ಆಗ್ಗಾಗ್ಗೆ ಮಾರ್ಪಾಡುಗೊಳಿಸುತ್ತದೆ
ಮೂಢನಂಬಿಕೆಯು ಪುರಾವೆಗಳನ್ನು ಕಡೆಗಣಿಸಿ ಸ್ಥಿರನಂಬಿಕೆಯನ್ನಷ್ಟೇ ಸಂರಕ್ಷಿಸಬಯಸುತ್ತದೆ''.
''ಹೋಮಿಯೋಪತಿಯು ವೈಜ್ಞಾನಿಕವೆಂದು ಪುರಾವೆಯೊಂದಗಿಸಿದಂದು ನೀನು
ನನ್ನ ಮನಸ್ಸು ಸಂಪೂರ್ಣವಾಗಿ ಬದಲಾಯಿಸುವೆನದರಂತೆ ನಾನು
ನಾ ಮುಜುಗರಕ್ಕೊಳಗಾಗುವುದಂತೂ ನಿಜವೇ ಹಾಗೇನಾದರೂ ಆದರೆಂದೂ
ಆದರೂ ರಸ್ತೆಯುದ್ದಕ್ಕೂ ಘೋಷಿಸುವೆ ಇದೊಂದು ಚಮತ್ಕಾರವೆಂದು
ಭೌತಶಾಸ್ತ್ರವೇ ಸುಳ್ಳು, ನೀರಿಗೆ ಜ್ಞಾಪಕ ಶಕ್ತಿ ಇಹುದೆಂದು.
ಕಿತ್ತಳೆಯ ರಸದ ನೆನಪು ನೀರಿನಲಿ ಅನಂತ, ನಿರ್ಮಲ.
ಅದ್ಹೇಗೋ, ಚಮತ್ಕಾರದಂತೆ ನೀರು ಮರೆತು ಬಿಡುವುದು ಮಲ!''
''ಅದು ಕೆಲಸ ಮಾಡುವ ರೀತಿಯನೊಮ್ಮೆ ವಿವರಿಸು ಪುರಾವೆ ಸಹಿತ
ಆಘಾತದಿಂದ ಚೇತರಿಸಿಕೊಂಡೊಡನೆ ಹಚ್ಚೆಯೊತ್ತಿಸುಕೊಳ್ಳುವೆ ತಲೆ ಮೇಲೆ ಪುರಾವೆ ಸಹಿತ''
ದಿಟ್ಟಿಸಿ ನನ್ನನ್ನೇ ಈಗ ನೋಡುವರೇ ಎಲ್ಲಾ
ಇನ್ನಂತೂ ಮಾತು ಮುಗಿಸುವುದೇ ಎಲ್ಲಾ
''ಜೀವನ ರಹಸ್ಯಗಳ ಬೀಡು ಸತ್ಯ
ಆದರೆ ಇಲ್ಲಿ ಉತ್ತರಗಳಿರುವುದೂ ಸತ್ಯ
ಗಂಭೀರ ಮುಖವಿರಿಸಿ ನಟಿಸುವರ ಮನದಿ
ಉತ್ತರವು ಸಿಗಲಾರದು ಪ್ರಶ್ನೆಗಳಿಗೆ ಇಹದಿ''
''ದೂರದರ್ಶನವ ನೀವು ನೋಡುವಿರಾದರೆ ಇಂದು
ಖಂಡಿತಾ ನೋಡಿ ಸ್ಕೂಬೀ ಡೂ ಒಂದು
ಚರ್ಚಿನಲೋ, ಶಾಲೆಯಲೋ ಬಂದಾಗ ದೆವ್ವಗಳು ಪ್ರತಿಬಾರಿ
ಮುಖವಾಡ ಕಳಚುವರದರಲ್ಲಿ ತಪ್ಪದೇ ಪ್ರತಿಸಾರಿ
ಇತಿಹಾಸದುದ್ದಕ್ಕೂ ಪರಿಹರಿಸಲ್ಪಟ್ಟ ರಹಸ್ಯಗಳೆಲ್ಲಾ
ಮಾಟಮಂತ್ರವೆಂದು ಸಾಬೀತಾಗಿದ್ದು ಒಂದೂ ಇಲ್ಲ''
''ಕಣ್ಣಿಟ್ಟು ನೋಡುತಿರುವ ಸತ್ಯವನು ಎದುರಿಸಲು ಭಯವೇನು?
ಮಧ್ಯಾಹ್ನವೊಂದರಲ್ಲಿ ವಿಕಿಪೀಡಿಯ ಪುಟವೊಂದರಿಂದ ಜ್ಞಾನೋದಯವಾಗಬಹುದೆಂಬ ಕಲ್ಪನೆಯ ಭೀತಿಯೆನು?
ಅತೀಂದ್ರಿಯ ಶಕ್ತಿಯು ಭ್ರಮೆಯಾಗಿರಬಹುದೆಂಬ ಸತ್ಯವು ನಿನ್ನ 'ಬುದ್ದಿಜೀವಿ'ತನಕ್ಕೆ ಧಕ್ಕೆಯಾಗುವುದೆಂಬ ಅಳಲೇನು?
ಗೂಗಲ್ ಮಾಡಿ ಹುಡುಕಬಹುದಾದ ವೈಜ್ಞಾನಿಕ ಸತ್ಯವನ್ನೂ ಹುಡುಕದೆ ಕುರುಡಾಗಿ ಮಂಜಿನಲೇ ನಿಂತಿರುವೆನೆಂಬ ಛಲವೇನು?''
''ಇದಿಷ್ಟೇ ಸಾಕಾಗದೇನು?
ಬರಿಯ ಈ ಪ್ರಪಂಚ?''
''ಈ ಸುಂದರ, ಸಂಕೀರ್ಣ, ಆಶ್ಚರ್ಯಕರ, ಅಗ್ರಾಹ್ಯ, ಕಲ್ಪನಾತೀತ, ನೈಸರ್ಗಿಕ ಪ್ರಪಂಚ?''
ಈ ಅಗಾಧ ಸೌಂದರ್ಯ ನಿನ್ನ ಗಮನಕ್ಕೆ ಬಾರದಿರುವುದಾದರೂ ಹೇಗೆ?
ಕ್ಷುಲ್ಲಕ, ಬಾಲಿಶ, ಮಾನವ ನಿರ್ಮಿತ ಕಟ್ಟುಕಥೆಗಳಿಂದ ಈ ಸೌಂದರ್ಯವ ಕಡೆಗಣಿಸಬೇಕೇ ಹೀಗೆ?
ಹಾ ಅದೇನೋ ಈ ಮೊದಲು ಷೇಕ್ಸ್ಪಿಯರ್ ಅಂದೆಯಲ್ಲಾ, ಈಗ ಕೇಳು
ಎರವಲು ಕೊಡು ನನಗೀಗ ನಿನ್ನ ಕಿವಿ,
ಆಗುವೆನು ನಾನೀಗ ದೊಡ್ಡ ಕವಿ!
ಪ್ರಪಂಚವ ಬಣ್ಣಿಸುವುದು
ಬಂಗಾರಕ್ಕೆ ಬಂಗಾರದ ಲೇಪ ಹಾಕಿದಂತೆ
ಲಿಲ್ಲಿ ಹೂವಿಗೆ ಬಣ್ಣವನ್ನು ಬಳಿದಂತೆ
ಮಲ್ಲಿಗೆ ಹೂವಿಗೆ ಸುಗಂಧ ದ್ರವ್ಯ ಲೇಪಿಸಿದಂತೆ
ಶೇಕ್ಸಪೀಯರ್ ಹಾಗೆ ಹೀಗೇನೋ ಅಂದಂತೆ
ನಿನಗೇನಾದರೂ ಕೃಷ್ಣನನೋ ವಿಷ್ಣುವನೋ, ವೈಭವೀಕರಿಸಬೆಂದಿದ್ದರೆ ವಸಾಹತುಶಾಹಿ ಮುಕ್ತ ಯುಗದ ಪ್ರತೀಕವೆಂದು
ನಿನ್ನಿಷ್ಟ, ನನ್ನದೇನೂ ಅಭ್ಯಂತರವಿಲ್ಲ ಅದರಳೊಂದೂ
ಆದರೆ ನನ್ನಉತ್ಸಾಹದ ಚಿಲುಮೆಯ ಮೂಲವನು ಕೇಳು
'' ನಾನೋರ್ವ ಅತಿ ಸಣ್ಣ, ಮುಖ್ಯವಲ್ಲದ, ಅರಿವಿಲ್ಲದ ಇಂಗಾಲದ ಉಂಡೆ
ಇರುವ ಜೀವ ಅತ್ಯಲ್ಪ, ಅನಿಶ್ಚಿತ, ಒಂದೇ
ಆದರೆ ಹೊಸ ವೈಜ್ಞಾನಿಕ ಅನ್ವೇಷಣೆಗಳಿಂದಾಗಿ ಈಗ ಜೀವಿಸಬಲ್ಲೆ ದುಪ್ಪಟ್ಟು
ನನ್ನ ತಾತ ಮುತ್ತಾತರ ಜೀವನದ ದುಪ್ಪಟ್ಟು
ನನ್ನೀ ಒಲವಿನ ಒಡತಿಯೊಂದಿಗಿರಲು ಜೀವನ ದುಪ್ಪಟ್ಟು
ನನ್ನೀ ನಲುಮೆಯ ಗೆಳೆರೊಡನಿರಲು ಜೀವನ ದುಪ್ಪಟ್ಟು''
ದುರಾದೃಷ್ಟವಶಾತ್ ನೋಯಿಸಿದ್ದರೆ ನಿನ್ನ ಮನವ
೧೦ ನಿಮಿಷ ಹಿಂದಿರುಗಿಸಲು ಬಯಸುವೆ ಸಮಯ
ಮನ ಬದಲಾಗಬಹುದೇನೋ ಎಂಬ ಆಶಯ!
----End----